ಸಾಂಗತ್ಯ ಬೆಂಗಳೂರು ಚಿತ್ರೋತ್ಸವದ ಸರಣಿಯಲ್ಲಿ ಪ್ರಕಟಿಸುತ್ತಿರುವ ಲೇಖನವಿದು. ಇಂದಿನಿಂದ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ ಆರಂಭ. ಈ ಹಿನ್ನೆಲೆಯಲ್ಲಿ ಸಿನಿಮಾಸಕ್ತರಿಗೆ ಅನುಕೂಲವಾಗುವಂತೆ ಮಾಸ್ಟರ್ಸ್ ಸಿನಿಮಾ ಮತ್ತು ಪುನರಾವಲೋಕನ ವಿಭಾಗದಡಿ ಪ್ರದರ್ಶಿತವಾಗುತ್ತಿರುವ ಚಿತ್ರಗಳ ನಿರ್ದೇಶಕರು, ನಟರ ಪರಿಚಯ ಕುರಿತ ಲೇಖನವಿದು.
ಹೆನ್ರಿ ಜಾರ್ಜಸ್ ಕ್ಲೌಟ್(1907-1977)
ಹೆನ್ರಿ ಜಾರ್ಜಸ್ ಕ್ಲೌಟ್ ಫ್ರೆಂಚ್ ಚಿತ್ರ ನಿರ್ದೇಶಕ. ಚಿತ್ರ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಪ್ರಯತ್ನಗಳನ್ನು ಮಾಡಿದ ಹೆನ್ರಿ, ಬಹಳ ಪ್ರಸಿದ್ದವಾದುದು ತನ್ನ ಥ್ರಿಲ್ಲರ್ ಸಿನಿಮಾಗಳಿಂದ. ದಿ ವೇಜಸ್ ಆಫ್ ಫಿಯರ್ ಮತ್ತು ಲೆಸ್ ಡೈಬೊಲಿಕಾಸ್ ಚಿತ್ರಗಳಂತೂ ಹೆನ್ರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿತು. ಸಿನಿಮಾಸಕ್ತರಿಂದ ಮತ್ತು ವಿಮರ್ಶಕರಿಂದ ಪ್ರಶಂಸೆಗೊಳಗಾದ ಇವೆರಡೂ ಚಿತ್ರಗಳು 1950 ರ ದಶಕದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿವೆ.
ಹೆನ್ರಿ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ಖ್ಯಾತ ಕಲಾವಿದ ಪಿಕಾಸೊ ಕುರಿತಂತೆ ದಿ ಮಿಸ್ಟರಿ ಆಫ್ ಪಿಕಾಸೊ ಸಾಕ್ಷ್ಯಚಿತ್ರ ಇವರದ್ದೇ.
ಮೊದಲು ಹೆನ್ರಿ ಒಬ್ಬ ಸಿನಿಮಾಸಕ್ತ. ಬಳಿಕ ಲೇಖಕನಾಗಿ ಭವಿಷ್ಯವನ್ನು ಕಂಡುಕೊಳ್ಳುವ ಇಚ್ಛೆಯಿಂದ ಪ್ಯಾರಿಸ್ ಗೆ ಹೋದರು. ಹೀಗೆ ಕೆಲ ವರ್ಷಗಳ ನಂತರ, ಬರ್ಲಿನ್ ನಲ್ಲಿ ಚಿತ್ರ ನಿರ್ಮಾಪಕನೊಬ್ಬ ಅವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಆಗಲೂ ಮಾಡಿದ್ದು, ಜರ್ಮನ್ ಸಿನಿಮಾಗಳ ಫ್ರೆಂಚ್ ಅವತರಣಿಕೆಗೆ ಚಿತ್ರ ಸಾಹಿತ್ಯ ಸಿದ್ಧಪಡಿಸಬೇಕಿತ್ತು. ಈ ಮಧ್ಯೆ ಆತ ಫ್ರಾನ್ಸ್ ಗೆ ವಾಪಸಾದರು. ಆದರೆ, ಪರಿಸ್ಥಿತಿ ಕೆಟ್ಟದಾಗಿತ್ತು. ಕ್ಷಯದಿಂದ ಬಳಲಿ ಹಾಸಿಗೆ ಹಿಡಿದಿದ್ದ ಹೆನ್ರಿ, ಕೆಲ ಕಾಲದ ನಂತರ ಚೇತರಿಸಿಕೊಂಡರು. ಆ ತರುವಾಯ ಜರ್ಮನ್ ಮಾಲೀಕತ್ವದ ಕಂಪನಿಯೊಂದರಲ್ಲಿ ಚಿತ್ರಕಥಾ ರಚನಾಕಾರರಾಗಿ ಸೇರಿಕೊಂಡರು. ಹೆನ್ರಿ ಬರೆದು ನಿರ್ದೇಶಿಸಿದ ಚಿತ್ರಗಳು ಜನಪ್ರಿಯವಾಗತೊಡಗಿದವು. ಈ ಮಧ್ಯೆ ಅವರ ಎರಡನೇ ಚಿತ್ರ ಲೀ ಕರ್ಬೋ ಸಾಕಷ್ಟು ವಿವಾದಕ್ಕೀಡಾಯಿತು. ಈ ಹಿನ್ನೆಲೆಯಲ್ಲಿ ಫ್ರೆಂಚ್ ಸರಕಾರ 1947 ರವರೆಗೂ ಅವರಿಗೆ ಸಿನಿಮಾ ಮಾಡದಂತೆ ನಿಷೇಧ ಹಾಕಿತು.
ನಂತರ ನಿಷೇಧವನ್ನು ವಾಪಸು ಪಡೆದ ನಂತರ, ಹೆನ್ರಿ ಕ್ವಾಯ್ ದೆಸ್ ಆರ‍್ಫೆವ್ರಸ್ ನಂತಹ ಚಿತ್ರಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಂಡರು. ಇಷ್ಟೊಂದು ಕ್ರಿಯಾಶೀಲವಾಗಿದ್ದ ಹೆನ್ರಿ ನಿಷ್ಕ್ರಿಯರಂತಾಗಿದ್ದು ತಮ್ಮ ಪತ್ನಿಯನ್ನು ಕಳೆದುಕೊಂಡ ಬಳಿಕ. ಪತ್ನಿಯ ಅಗಲಿಕೆ ಅವರನ್ನು ಒಂದೆಡೆ ಸಂಕಷ್ಟಕ್ಕೆ ದೂಡಿದರೆ, ಮತ್ತೊಂದೆಡೆ ಫ್ರೆಂಚ್ ಹೊಸ ಅಲೆಯವರಿಂದ ಟೀಕೆಗೆ ಒಳಗಾಗಬೇಕಾಯಿತು. ಹಾಗಾಗಿ ಕೆಲವು ಸಾಕ್ಷ್ಯಚಿತ್ರಗಳಿಗೆ ಸೀಮಿತಗೊಂಡರು.