ಕುರಸೋವಾರ ಬಗ್ಗೆ ವಿನಾಯಕ ಪಂಡಿತರು ಬರೆದ ಹಳೆಯ ಲೇಖನವಿದು. 5 ನೇ ಬೆಂಗಳೂರು ಚಿತ್ರೋತ್ಸವದಲ್ಲಿ ಕುರಸೋವಾರ ಚಿತ್ರಗಳು ಮಾಸ್ಟರ್ಸ್ ಆಫ್ ಸಿನಿಮಾ ವಿಭಾಗದಲ್ಲಿ ಪ್ರದರ್ಶಿಸುತ್ತಿರುವುದರಿಂದ ಸಿನಿಮಾಸಕ್ತರಿಗೆ ಮತ್ತೆ ಓದಲು ಲಭ್ಯವಾಗಲೆಂದು ಈ ಲೇಖನ ಪ್ರಕಟಿಸುತ್ತಿದ್ದೇವೆ.
ಕುರೋಸಾವರ ಏಳು ಸಮುರಾಯಿಗಳು (seven samurai), ಇಕುರು, ರಹಸ್ಯ ಕೋಟೆ (the hidden fortress), ಆತ್ಮ ರಕ್ಷಕ (yojimbo), ಸಂಜೂರೋ, ರಕ್ತಸಿಂಛಿತ ಸಿಂಹಾಸನ (the throne of blood), ರಾಶೋಮನ್, ಮತ್ತು ಮಾದದೆಯೋ ಚಿತ್ರಗಳನ್ನು ನೋಡಿ ಪಡೆದ ಆನಂದವೇ ಈ ಲೇಖನಕ್ಕೆ ಕಾರಣ. ಇಲ್ಲಿ ಕುರೋಸಾವರ ಚಿತ್ರಗಳ ವಿಮರ್ಶೆಯಿಲ್ಲ. ಅವರ ಚಿತ್ರಗಳನ್ನು ನೋಡಿದ ಅನುಭವವನ್ನು ಹಂಚಿಕೊಳ್ಳುವ ಪ್ರಯತ್ನವಿದೆ.ಇವುಗಳಲ್ಲಿ ರಹಸ್ಯ ಕೋಟೆ, ಯೊಜಿಂಬೋ, ಮತ್ತು ಸಂಜೂರೊ ಒಂದೇ ಗುಂಪಿನ ಚಿತ್ರಗಳೆನ್ನಬಹುದು. ಇವುಗಳ ಬರುವನ್ನು ಸಾರುತ್ತ ಬಂದಂತಿದೆ, ಏಳು ಸಮುರಾಯಿಗಳು.
ಉಳಿದ ಚಿತ್ರಗಳಲ್ಲಿ ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ ಒಂದೇ ಗುಂಪಿನವು. ಇಕುರು ಮತ್ತು ಮಾದದೆಯೋ ಸ್ವತಂತ್ರವಾಗಿ ಮೂಡಿ ಬಂದ ಚಿತ್ರಗಳು. ಇಕುರು ಯುರೋಪಿನ existentialismನಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು. ಜಪಾನಿನ ತಮ್ಮ ಸಮಕಾಲೀನ ಪರಿಸ್ಥಿತಿ ಮತ್ತು ಸಂಸ್ಕೃತಿಯೊಂದಿಗೆ ಅನುಕಂಪ ಬೆಳೆದ ಮೇಲಿನ ಹೇಳಿಕೆ, ಮಾದದೆಯೊ. ಮನುಷ್ಯರ ಅಸ್ತಿತ್ವದ, ನಡುವಳಿಕೆಯ ಹಲವು ಆಯಾಮಗಳ ಬಗ್ಗೆ ಕುರೋಸಾವರಿಗಿರುವ ಕುತೂಹಲವೇ ಈ ಎಲ್ಲ ಚಿತ್ರಗಳನ್ನು ಒಂದುಗೂಡಿಸಿದೆ.
ನಾನು ಮೇಲೆ ಮಾಡಿರುವ ವರ್ಗೀಕರಣವನ್ನು ವಿವರಿಸುವ ಅಗತ್ಯವಿದೆ. ಕುರೋಸಾವರ ಚಿತ್ರಗಳಲ್ಲಿ ನಮ್ಮ ಮತ್ತು ಕುರೋಸಾವರ ಕುತೂಹಲವನ್ನು ಕೆರಳಿಸುವವರು ಸಮುರಾಯಿಗಳು - ಅಂದರೆ ಗುತ್ತಿಗೆಯ ಯೋಧರು (ಇವರನ್ನು ರಾಜರಿಂದ ಹಿಡಿದು ಹಳ್ಳಿಯ ರೈತರು ಕೂಡ ಉಪಯೋಗಿಸಿಕೊಳ್ಳುತ್ತಿದ್ದರು). ಅವರ ಹಾವ ಭಾವಗಳನ್ನು ಕುರೋಸಾವ ಪೂರ್ತಿಯಾಗಿ ಕಲ್ಪಿಸಿಕೊಳ್ಳಬಲ್ಲರು. ಅವರ ಸಾಮಾಜಿಕ ಬದುಕು ಮತ್ತು ಧೋರಣೆಯ ಬಗ್ಗೂ ಕುರೊಸಾವಾರಿಗೆ ಸಹಾನುಭೂತಿಯಿದೆ. ಒಂದು ರೀತಿಯಲ್ಲಿ ಅವರು ಅವರ ಪ್ರೀತಿಪಾತ್ರರು. ಆದರೂ, ಅವರಿಗೆ ಅವರ ಅಂತರಂಗವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಆಗಿಲ್ಲ. ಸಮುರಾಯಿಗಳು ಈ ಆತ್ಮೀಯತೆಯ ಮತ್ತು ಕುತೂಹಲದ ಭವ್ಯ ಮಿಶ್ರಣಗಳಾಗಿ, ಸಾಹಸಮಯ ಪ್ರಸಂಗಗಳಾದ ಯೊಜಿಂಬೊ, ಸಂಜೂರೋ, ಮತ್ತು ಆತ್ಮರಕ್ಷಕಗಳಲ್ಲಿ ಹೊರಹೊಮ್ಮಿದ್ದಾರೆ. ಈ ಮೂರೂ ಚಿತ್ರಗಳಿಗೆ ಪೀಠಿಕೆಯೆಂಬಂತೆ ಮೂಡಿಬಂದಿರುವದು, ಏಳು ಸಮುರಾಯಿಗಳು. ಇದು ಐತಿಹಾಸಿಕ, ಜಾನಪದ ಕತೆ ಹೇಳುವಲ್ಲಿ ಹೊಸ ಅಧ್ಯಾಯವನ್ನೇ ತೆರೆಯಿತು. ಮಾನವರು ತಮ್ಮ ಸಹಜ ನಡುವಳಿಕೆಯ ಹೊರತಾಗಿ, ಪ್ರಚೋದನೆಯ ಅಡಿಯಲ್ಲಿ ನಾವು ಗುರುತಿಸಲೇ ಸಾಧ್ಯವಾಗದಂತವರಾಗಿ ಕಾಣಬರುತ್ತಾರೆ. ಮಾನವರ ಈ ಅಸ್ತಿತ್ವದ ಬಗ್ಗೆ ನಮ್ಮ ಅರಿವಿಕೆಯನ್ನು ಹೆಚ್ಚಿಸುವ ಚಿತ್ರಗಳೆಂದರೆ, ರಾಶೋಮನ್ ಮತ್ತು ರಕ್ತಸಿಂಛಿತ ಸಿಂಹಾಸನ. ಇಕುರು, ಪಾಶ್ಚಿಮಾತ್ಯ ಸಾಹಿತ್ಯ ಮತ್ತು ನಾಟಕಗಳಿಂದ ಪ್ರಭಾವಿತವಾದದ್ದು. ಅನೇಕ ಕಾರಣಗಳಿಂದ ಈ ಚಿತ್ರ ನನಗೆ ದೂರವಾಗೇ ಉಳಿಯಿತು. ಮಾದದೆಯೋ ಕುರೋಸಾವಾರ ಅರಳು-ಮರಳು ಎಂಬಂತಿದೆ.ಕುರೊಸಾವರ ನೈಪುಣ್ಯತೆ ಚಲನ ಚಿತ್ರ ಮಾಧ್ಯಮದ ಎಲ್ಲ ಅಂಶಗಳನ್ನೂ ಒಳಗೊಂದಿದೆ. ತಾಂತ್ರಿಕತೆ, ಕಥೆಯ ನಿರೂಪಣೆ ಮತ್ತು ಪಾತ್ರ ಸೄಷ್ಟಿ. ವೈಯಕ್ತಿಕವಾಗಿ ನನ್ನನ್ನು ಆಕರ್ಷಿಸುವದು ನಿರೂಪಣ ಕೌಶಲ್ಯ ಮತ್ತು ಪಾತ್ರ ಸೃಷ್ಟಿ. ಅವರ ಮೆಚ್ಚುಗೆಯ ಸಂಜೂರೊ ನಮಗೂ ಚಿರಪರಿಚಿತನಾದರೆ ಆಶ್ಚರ್ಯವೇನಿಲ್ಲ. ಇದರಲ್ಲಿ ಅವರ ನಟರ ತಂಡದ ಯೋಗದಾನ ಅಷ್ಟೇ ಮಹತ್ವದ್ದು. ಹಾಗೆಂದು, ಅವರ ತಾಂತ್ರಿಕತೆಯ ಬಗ್ಗೆ ನಾವು ನಿರ್ಲಿಪ್ತರಾಗಿರಲು ಸಾಧ್ಯವಿಲ್ಲ. Dedicated to the memory of Kurosava ಎಂದು ಮಾಡಿರುವ ಚಿತ್ರಗಳನ್ನು ನೋಡಿದರೆ, ಇವರು ಕುರೋಸಾವಾನಿಂದ ಒಂದಿನಿತಾದರೂ ಪ್ರಭಾವಿತರಾಗಿದ್ದರೇ ಎಂಬ ಪ್ರಶ್ನೆಯೇಳುತ್ತದೆ (ಪ್ರಮುಖವಾಗಿ ಹಿಂದಿಯ "ಚೈನಾ ಗೇಟ್" ಎಂಬ ಚಿತ್ರವನ್ನು ಗಮನಿಸಿ..ಬೇಕಾದಷ್ಟು ಇಂಗ್ಲಿಷ್ ಚಿತ್ರಗಳೂ ಇವೆ). ನಂತರ ಹೊಳೆಯುವದೇನೆಂದರೆ ಈ ನಿರ್ದೇಶಕರುಗಳು ಕುರೋಸಾವರ ತಾಂತ್ರಿಕತೆಯಿಂದ ಮಾತ್ರ ಪ್ರಭಾವಿತರಾಗಿದ್ದಾರೆ ಎಂಬುದು.


4:32 AM
saangatya

