Thursday, December 20, 2012

ಬೆಂಗಳೂರು ಚಿತ್ರೋತ್ಸವ : ಮಾಸ್ಟರ್ಸ್ ನಿಂದ ಹಿಡಿದು ರೆಟ್ರಾಸ್ಪೆಕ್ಟಿವ್ ವರೆಗೆ


ಸಾಂಗತ್ಯ ಬೆಂಗಳೂರು ಚಿತ್ರೋತ್ಸವದ ಸರಣಿಯಲ್ಲಿ ಪ್ರಕಟಿಸುತ್ತಿರುವ ಲೇಖನವಿದು. ಇಂದಿನಿಂದ ವಿವಿಧ ವಿಭಾಗಗಳಲ್ಲಿ ಚಿತ್ರ ಪ್ರದರ್ಶನ  ಆರಂಭ. ಈ ಹಿನ್ನೆಲೆಯಲ್ಲಿ ಸಿನಿಮಾಸಕ್ತರಿಗೆ ಅನುಕೂಲವಾಗುವಂತೆ ಮಾಸ್ಟರ್ಸ್ ಸಿನಿಮಾ ಮತ್ತು ಪುನರಾವಲೋಕನ ವಿಭಾಗದಡಿ ಪ್ರದರ್ಶಿತವಾಗುತ್ತಿರುವ ಚಿತ್ರಗಳ ನಿರ್ದೇಶಕರು, ನಟರ ಪರಿಚಯ ಕುರಿತ ಲೇಖನವಿದು. 
ಹೆನ್ರಿ ಜಾರ್ಜಸ್ ಕ್ಲೌಟ್(1907-1977)
ಹೆನ್ರಿ ಜಾರ್ಜಸ್ ಕ್ಲೌಟ್ ಫ್ರೆಂಚ್ ಚಿತ್ರ ನಿರ್ದೇಶಕ. ಚಿತ್ರ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಪ್ರಯತ್ನಗಳನ್ನು ಮಾಡಿದ ಹೆನ್ರಿ, ಬಹಳ ಪ್ರಸಿದ್ದವಾದುದು ತನ್ನ ಥ್ರಿಲ್ಲರ್ ಸಿನಿಮಾಗಳಿಂದ. ದಿ ವೇಜಸ್ ಆಫ್ ಫಿಯರ್ ಮತ್ತು ಲೆಸ್ ಡೈಬೊಲಿಕಾಸ್ ಚಿತ್ರಗಳಂತೂ ಹೆನ್ರಿಗೆ ಸಾಕಷ್ಟು ಕೀರ್ತಿ ತಂದುಕೊಟ್ಟಿತು. ಸಿನಿಮಾಸಕ್ತರಿಂದ ಮತ್ತು ವಿಮರ್ಶಕರಿಂದ ಪ್ರಶಂಸೆಗೊಳಗಾದ ಇವೆರಡೂ ಚಿತ್ರಗಳು 1950 ರ ದಶಕದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿವೆ.
ಹೆನ್ರಿ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ಖ್ಯಾತ ಕಲಾವಿದ ಪಿಕಾಸೊ ಕುರಿತಂತೆ ದಿ ಮಿಸ್ಟರಿ ಆಫ್ ಪಿಕಾಸೊ ಸಾಕ್ಷ್ಯಚಿತ್ರ ಇವರದ್ದೇ.
henri georges clouzt
henri georges clouzt
ಮೊದಲು ಹೆನ್ರಿ ಒಬ್ಬ ಸಿನಿಮಾಸಕ್ತ. ಬಳಿಕ ಲೇಖಕನಾಗಿ ಭವಿಷ್ಯವನ್ನು ಕಂಡುಕೊಳ್ಳುವ ಇಚ್ಛೆಯಿಂದ ಪ್ಯಾರಿಸ್ ಗೆ ಹೋದರು. ಹೀಗೆ ಕೆಲ ವರ್ಷಗಳ ನಂತರ, ಬರ್ಲಿನ್ ನಲ್ಲಿ ಚಿತ್ರ ನಿರ್ಮಾಪಕನೊಬ್ಬ ಅವರನ್ನು ಕೆಲಸಕ್ಕೆ ನೇಮಿಸಿಕೊಂಡರು. ಆಗಲೂ ಮಾಡಿದ್ದು, ಜರ್ಮನ್ ಸಿನಿಮಾಗಳ ಫ್ರೆಂಚ್ ಅವತರಣಿಕೆಗೆ ಚಿತ್ರ ಸಾಹಿತ್ಯ ಸಿದ್ಧಪಡಿಸಬೇಕಿತ್ತು. ಈ ಮಧ್ಯೆ ಆತ ಫ್ರಾನ್ಸ್ ಗೆ ವಾಪಸಾದರು. ಆದರೆ, ಪರಿಸ್ಥಿತಿ ಕೆಟ್ಟದಾಗಿತ್ತು. ಕ್ಷಯದಿಂದ ಬಳಲಿ ಹಾಸಿಗೆ ಹಿಡಿದಿದ್ದ ಹೆನ್ರಿ, ಕೆಲ ಕಾಲದ ನಂತರ ಚೇತರಿಸಿಕೊಂಡರು. ಆ ತರುವಾಯ ಜರ್ಮನ್ ಮಾಲೀಕತ್ವದ ಕಂಪನಿಯೊಂದರಲ್ಲಿ ಚಿತ್ರಕಥಾ ರಚನಾಕಾರರಾಗಿ ಸೇರಿಕೊಂಡರು. ಹೆನ್ರಿ ಬರೆದು ನಿರ್ದೇಶಿಸಿದ ಚಿತ್ರಗಳು ಜನಪ್ರಿಯವಾಗತೊಡಗಿದವು. ಈ ಮಧ್ಯೆ ಅವರ ಎರಡನೇ ಚಿತ್ರ ಲೀ ಕರ್ಬೋ ಸಾಕಷ್ಟು ವಿವಾದಕ್ಕೀಡಾಯಿತು. ಈ ಹಿನ್ನೆಲೆಯಲ್ಲಿ ಫ್ರೆಂಚ್ ಸರಕಾರ 1947 ರವರೆಗೂ ಅವರಿಗೆ ಸಿನಿಮಾ ಮಾಡದಂತೆ ನಿಷೇಧ ಹಾಕಿತು.
ನಂತರ ನಿಷೇಧವನ್ನು ವಾಪಸು ಪಡೆದ ನಂತರ, ಹೆನ್ರಿ ಕ್ವಾಯ್ ದೆಸ್ ಆರ‍್ಫೆವ್ರಸ್ ನಂತಹ ಚಿತ್ರಗಳನ್ನು ಕೈಗೊಳ್ಳುವ ಮೂಲಕ ಜನಪ್ರಿಯತೆಯನ್ನು ಮತ್ತೆ ಗಳಿಸಿಕೊಂಡರು. ಇಷ್ಟೊಂದು ಕ್ರಿಯಾಶೀಲವಾಗಿದ್ದ ಹೆನ್ರಿ ನಿಷ್ಕ್ರಿಯರಂತಾಗಿದ್ದು ತಮ್ಮ ಪತ್ನಿಯನ್ನು ಕಳೆದುಕೊಂಡ ಬಳಿಕ. ಪತ್ನಿಯ ಅಗಲಿಕೆ ಅವರನ್ನು ಒಂದೆಡೆ ಸಂಕಷ್ಟಕ್ಕೆ ದೂಡಿದರೆ, ಮತ್ತೊಂದೆಡೆ ಫ್ರೆಂಚ್ ಹೊಸ ಅಲೆಯವರಿಂದ ಟೀಕೆಗೆ ಒಳಗಾಗಬೇಕಾಯಿತು. ಹಾಗಾಗಿ ಕೆಲವು ಸಾಕ್ಷ್ಯಚಿತ್ರಗಳಿಗೆ ಸೀಮಿತಗೊಂಡರು.
ಅಕಿರಾ ಕುರಸೋವಾ(1910-1998)
ಅಕಿರಾ ಕುರಸೋವಾ ಚಿತ್ರ ಜಗತ್ತಿಗೇ ಹೊಸ ದಿಕ್ಕನ್ನು ತೋರಿಸಿದ ದಿಗ್ದರ್ಶಕ. ಕಥನಕ್ರಮದಿಂದ ಹಿಡಿದು ತಾಂತ್ರಿಕ ನೆಲೆಯಲ್ಲೂ ಹೊಸತನ ತರಲು ಪ್ರಯತ್ನಿಸಿದ ಕುರಸೋವಾ ತಮ್ಮ 57 ವರ್ಷದ ಚಿತ್ರ ಜೀವನದಲ್ಲಿ 30 ಸಿನಿಮಾಗಳನ್ನು ನಿರ್ದೇಶಿಸಿದರು.
ಕುರಸೋವಾ ಬರಿದೇ ನಿರ್ದೇಶಕರಾಗಿರಲಿಲ್ಲ. ಅವರಲ್ಲೊಬ್ಬ ಕಲಾವಿದನೂ ಇದ್ದ. ಅದು ಡ್ರೀಮ್ಸ್ ನಂಥ ಚಿತ್ರಗಳ ಫ್ರೇಮ್ ಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಕುರಸೋವಾ ಚಿತ್ರ ಜಗತ್ತಿಗೆ ಪ್ರವೇಶಿಸಿದ್ದು 1936 ರಲ್ಲಿ. ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ, ಚಿತ್ರಕಥಾಗಾರರಾಗಿ ದುಡಿದ ನಂತರ 1943 ರಲ್ಲಿ ಸಾಹಸ ಪ್ರಧಾನವಾದ ಚಿತ್ರ ಸಂಶಿರೋ ಸುಗತೊ ನಿರ್ದೇಶಿಸಿದರು. ನಂತರ ನಿರ್ದೇಶಿಸಿದ ಡ್ರಂಕನ್ ಏಂಜಲ್ ಸಾಕಷ್ಟು ಸಿನಿಮಾಸಕ್ತರ ಗಮನ ಸೆಳೆಯಿತು. ಆಗ ಆದದ್ದು ಚಿತ್ರ ಜಗತ್ತಿಗೆ ಎರಡು ಲಾಭ. ಮೊದಲನೆಯದು ಕುರಸೋವಾನ ಚಿತ್ರ ನಿರ್ದೇಶಕ ಸರಿಯಾಗಿ ಬೆಳಕಿಗೆ ಬಂದಿದ್ದು, ಮತ್ತೊಂದು ಮಹಾನ್ ಕಲಾವಿದ ತೊಶಿರೊ ಮಿಫುನೆ ತೆರೆ ಮೇಲೆ ಬಂದದ್ದು.
Akira Kurosawa
Akira Kurosawa
ಕುರಸೋವಾರ ಬಹು ಚಿತ್ರಗಳಲ್ಲಿ ಈ ಮಿಫುನೆ ಇದ್ದಾನೆ. ನಂತರ ಸುಮಾರು 15 ಚಿತ್ರಗಳಲ್ಲಿ ಇವರಿಬ್ಬರೂ ಒಟ್ಟಿಗೇ ಕೆಲಸ ಮಾಡಿದರು. 1950 ರಲ್ಲಿ ಕುರಸೋವಾ ನಿರ್ದೇಶಿಸಿದ ರೊಶೊಮನ್ ಸೃಷ್ಟಿಸಿದ ಅಲೆಯೇ ಬೇರೆ. ಒಂದು ಕಥೆಯನ್ನು ವಿವಿಧ ನೆಲೆಗಳಿಂದ ಹೇಳುವ ಎನ್ನುವುದಕ್ಕಿಂತಲೂ ಕನ್ ವಿನ್ಸ್ ಮಾಡುವಂಥ ತಂತ್ರ ಇದರಲ್ಲಿ ಯಶಸ್ವಿಯಾಗಿತ್ತು. ಸತ್ಯವೆಂಬುದು ವಸ್ತುನಿಷ್ಠವೋ, ವಿಷಯನಿಷ್ಠವೋ ಎಂಬುದು ಚರ್ಚೆಗೀಡಾಗುವಂಥ ಪ್ರಸಂಗ ಬಂದದ್ದೂ ಅಲ್ಲೇ. ಒಂದು ಸನ್ನಿವೇಶವನ್ನು ಎಲ್ಲರೂ ತಮ್ಮ ತಮ್ಮ ನೆಲೆಗೆ ಹೊಂದಿಸಿಕೊಂಡು ಪುನರ್ರೂಪಿಸಿ ತಮ್ಮ ನೇರಕ್ಕೆ ಪ್ರತಿಪಾದಿಸುವ ಬಗೆಯನ್ನೇ ಹೇಳಲು ಹೊರಟದ್ದು. ಅಂಥ ಚಿತ್ರ ಹೊಸ ಸಾಧ್ಯತೆಯನ್ನೇ ತೆರೆಯಿತು. ವಿಚಿತ್ರವೆನ್ನಿಸುವಂತೆ ಆ ಚಿತ್ರ ವೆನಿಸ್ ಸಿನಿಮೋತ್ಸವದಲ್ಲಿ ಗೋಲ್ಡನ್ ಲಯನ್ ಪ್ರಶಸ್ತಿ ಗೆದ್ದು ಬಿಟ್ಟಿತು. ಜತೆಗೆ ಉತ್ತರ ಅಮೆರಿಕಾ ಮತ್ತು ಯುರೋಪ್ ನಲ್ಲಿ ಬಿಡುಗಡೆಗೊಂಡಿತು. ಈ ಚಿತ್ರದ ವಾಣಿಜ್ಯಾತ್ಮಕ ಯಶಸ್ಸು ಮತ್ತು ಸಿನಿಮಾಸಕ್ತರಿಂದ ಗಳಿಸಿದ ಪ್ರಶಂಸೆ ಜಪಾನಿ ಚಿತ್ರಗಳಿಗೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಬ್ಬಾಗಿಲು ತೆರೆಯಿತು. ಜಪಾನಿನ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗತೊಡಗಿದವು.
ಬಳಿಕ ಕುರಸೋವಾ ಇಕಿರು, ಸೆವೆನ್ ಸಮುರಾಯ್, ಯೋಜಿಂಬೊ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದರು. ಕಾಗೆಮುಷಾ ಮತ್ತು ರಾನ್ ಸಹ ಬಹಳ ಹೆಸರು ಮಾಡಿದ ಚಿತ್ರಗಳು. ಕಾಗೆಮುಷಾಕ್ಕೆ ಗೋಲ್ಡನ್ ಪಾಮ್ ಪ್ರಶಸ್ತಿಯೂ ಸಿಕ್ಕಿತು. 1990 ರಲ್ಲಿ ಜೀವಿತಾವಧಿ ಸಾಧನೆಗೆ ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಂದಿಗೂ ಕುರಸೋವಾ ಸಿನಿಮಾಸಕ್ತರಿಗೆ ಇಷ್ಟವಾಗುವುದು, ಪದೇ ಪದೇ ಚರ್ಚೆಗೊಳಗಾಗುವುದು ರೊಶೊಮನ್ ಚಿತ್ರದಿಂದಲೇ.
ಮಿಕೆಲೆಂಜಲೋ ಅಂತೊನೊಯೊನಿ (1912-2007)
ಮಿಕೆಲೆಂಜಲೋ ಇಟಾಲಿಯನ್ ಚಿತ್ರ ನಿರ್ದೇಶಕ. ಕಥಾ ನಿರೂಪಣೆ ಕ್ರಮಕ್ಕೆ ಹೊಸತನವನ್ನು ತಂದುಕೊಡಲು ಪ್ರಯತ್ನಿಸಿದವರು. ಅದುವರೆಗೆ ಇದ್ದ ನಿರೂಪಣಾ ಕ್ರಮದ ಪರಿಕಲ್ಪನೆಯನ್ನು ಬದಲಿಸಲು ಪ್ರಯತ್ನಿಸಿದ್ದಲ್ಲದೇ, ಕಥನ ಕ್ರಮ, ವಾಸ್ತವವಾದ ಎಲ್ಲವನ್ನೂ ಮರು ವ್ಯಾಖ್ಯಾನಕ್ಕೆ ತೊಡಗಿದವರು.
michelongolo anthoniyoni
michelongolo anthoniyoni
ಮಿಕೆಲೆಂಜಲೊ ಸಿನಿಮಾ ಜಗತ್ತಿನಲ್ಲಿ ಬಹಳಷ್ಟು ಪ್ರಸಿದ್ಧಿಯಾಗಿರುವುದೇ ತಮ್ಮ ಮೂರು ಸರಣಿ ಚಿತ್ರಗಳಿಂದ. ಲಾವೆಂಚುರ (1960), ಲಾನೊಟೆ (1961) ಹಾಗೂ ಎಕ್ಲಿಪ್ಸ್ (1992) ಈ ತ್ರಿವಳಿ ಚಿತ್ರಗಳು. ಪಾತ್ರದ ಸೃಷ್ಟಿ ಮೂಲಕವೇ ಹೊಸಬಗೆಯ ದೃಶ್ಯಾನುಭೂತಿಯನ್ನು ನೀಡಲು ಹೊರಟ. ಹಾಗಾಗಿ ಇವರ ಚಿತ್ರಗಳು ಸಿನಿಮಾದ ಹೊಸ ಸಾಧ್ಯತೆಯನ್ನು ಹೇಳುತ್ತವೆ.
ತನ್ನ ಚಿತ್ರ ಜೀವನದಲ್ಲಿ 38 ಸಿನಿಮಾಗಳನ್ನು ನಿರ್ದೇಶಿಸಿ, 31 ಚಿತ್ರಗಳಿಗೆ ಸಾಹಿತ್ಯ ಒದಗಿಸಿದರು. 9 ಚಿತ್ರಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿದರು. ಗೋಲ್ಡನ್ ಪಾಮ್, ಅಕಾಡೆಮಿ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಇವನಿಗೆ ಸಂದವು. ಅವರ ಚಿತ್ರಗಳು ಎಂದಿಗೂ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ಹೋಗುವುದಿಲ್ಲ, ಬದಲಿಗೆ ಜೀವನ, ಸಂಬಂಧಗಳ ಬಗ್ಗೆ ಪ್ರಶ್ನೆಗಳು ನಮ್ಮೊಳಗೆ ಏಳುವಂತೆ ಮಾಡುತ್ತವೆ.
ಪುನರಾವಲೋಕನ
ಪಾರ್ಕ್ ಚಾನ್ ವುಕ್
ದಕ್ಷಿಣ ಕೊರಿಯಾದ ಚಿತ್ರ ನಿರ್ದೇಶಕನಾದ ಪಾರ್ಕ್, ಅತ್ಯಂತ ಜನಪ್ರಿಯ ಚಿತ್ರ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ವಿಮರ್ಶಕರಾಗಿಯೂ ಕೆಲಸ ಮಾಡಿದ್ದ ಪಾರ್ಕ್, ತತ್ತ್ವಶಾಸ್ತ್ರವನ್ನು ಓದಿದವರು. ತಾನು ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ, ಸಿನಿಮಾಸಕ್ತರನ್ನು ಕೂಡಿಹಾಕಿ ಕ್ಲಬ್ ನ್ನು ಸ್ಥಾಪಿಸಿದ್ದ ಪಾರ್ಕ್, ಆ ಮೂಲಕ ಸಿನಿಮಾ ಮಾಧ್ಯಮದ ಬಗೆಗಿನ ಪ್ರಜ್ಞೆಯನ್ನು ಅರಳಿಸುತ್ತಾ ಬಂದವರು. ಈ ಚಟುವಟಿಕೆ ಅವರ ಸಿನಿಮಾಸಕ್ತಿಯನ್ನು ಮತ್ತಷ್ಟು ತೀವ್ರಗೊಳಿಸಿತು. ಮೊದಮೊದಲು ಸಿನಿಮಾ ನಿಯತಕಾಲಿಕೆಗಳಿಗೆ ಲೇಖನ ಬರೆಯುತ್ತಿದ್ದರು. ಬಳಿಕ ಯೂ ಯಾಂಗ್ ಜಿನ್, ಕಾಕ್ ಜೆಯಂಗ್ ರಂಥವರಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು.
Chan-wook-Park
Chan-wook-Park
1992 ರಲ್ಲಿ ದಿ ಮೂನ್ ಈಸ್..ದಿ ಸನ್ಸ್ ಡ್ರೀಮ್ ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರ ಜಗತ್ತಿಗೆ ಪ್ರವೇಶ ಪಡೆದು, ಐದು ವರ್ಷದ ಬಳಿಕ ತಮ್ಮ ಎರಡನೇ ಸಿನಿಮಾ ನಿರ್ಮಿಸಿದರು. ಇದೂ ಸಹ ಬಹಳ ಯಶಸ್ಸನ್ನು ತಂದುಕೊಡಲಿಲ್ಲ. ಪಾರ್ಕ್ ಮತ್ತೆ ಸಿನಿಮಾ ವಿಮರ್ಶೆಯತ್ತ ಮುಖ ಮಾಡಿದರು.
2000 ರಲ್ಲಿ ನಿರ್ದೇಶಿಸಿದ ಜಾಯಿಂಟ್ ಸೆಕ್ಯೂರಿಟಿ ಏರಿಯಾ ತಂದುಕೊಟ್ಟ ಯಶಸ್ಸು, ಪಾರ್ಕ್ ರನ್ನು ಕೈ ಹಿಡಿಯಿತು. ವಾಣಿಜ್ಯಾತ್ಮಕವಾಗಿ ಹಾಗೂ ಸಿನಿಮಾಸಕ್ತರಿಂದಲೂ ವ್ಯಾಪಕ ಪ್ರಶಂಸೆಗೆ ಒಳಗಾಯಿತು. ಈ ಗೆಲುವು ದಿ ವೆಂಜೆನ್ಸ್ ಟ್ರೈಲಜಿಯಂಥ ಚಿತ್ರ ಸರಣಿ ಮೂಲಕ ತಮ್ಮ ಸೃಜನಾತ್ಮಕ ಅಭಿವ್ಯಕ್ತಿಗೆ ದಾರಿ ಮಾಡಿಕೊಂಡರು. ಸಿಂಪಥಿ ಫಾರ್ ಮಿ. ವೆಂಜೆನ್ಸ್, ಓಲ್ಡ್ ಬಾಯ್ ಮತ್ತು ಸಿಂಪಥಿ ಫಾರ್ ಲೇಡಿ ವೆಂಜೆನ್ಸ್ ಈ ಸರಣಿ ಚಿತ್ರಗಳು.
ತಮ್ಮ ಚಿತ್ರದಲ್ಲಿ ಹಿಂಸೆಯನ್ನು ಅತಿಯಾಗಿರುತ್ತೆ ಎಂಬುದನ್ನು ಒಪ್ಪಿಕೊಳ್ಳುವ ಅವರು, ಕೊರಿಯಾದಲ್ಲಿ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಗ್ರ್ಯಾಂಡ್ ಫಿಕ್ಸ್ ನಿಂದ ಹಿಡಿದು ಹಲವು ಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ. ಪಾರ್ಕ್, ನಿರ್ದೇಶಿಸಿದ ಇಂಗ್ಲಿಷ್ ಚಿತ್ರ ಸ್ಟಾಕರ್.
ಗಿರೀಶ್ ಕಾಸರವಳ್ಳಿ
ಭಾರತೀಯ ಸಿನಿಮಾದ ಹೊಸ ಅಲೆಯ ಚಿತ್ರಗಳ ಚಳವಳಿಯಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿರುವ ಗಿರೀಶ್ ಕಾಸರವಳ್ಳಿ, ಶಿವಮೊಗ್ಗದ ತೀರ್ಥಹಳ್ಳಿಯವರು. ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್ ನಲ್ಲಿ ಸಿನಿಮಾ ನಿರ್ದೇಶನ ಕೋರ್ಸ್‌ನ್ನು ಕಲಿತದ್ದಲ್ಲದೇ, ಚಿನ್ನದ ಪದಕ ಗಳಿಸಿದವರು. 1977 ರಲ್ಲಿ ಘಟಶ್ರಾದ್ಧದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದವರು. ಅದಕ್ಕಿಂತ ಮುನ್ನ ಬಿ.ವಿ. ಕಾರಂತರು ನಿರ್ದೇಶಿಸಿದ ಚೋಮನ ದುಡಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಮೂಲತಃ ಔಷಧವಿಜ್ಞಾನದ ಪದವೀಧರರು.
girish kasaravalli
girish kasaravalli
ತಮ್ಮ ಊರಿಗೆ ಬರುತ್ತಿದ್ದ ಟೂರಿಂಗ್ ಟಾಕೀಸ್‌ನ ಸಿನಿಮಾಗಳು ಮತ್ತು ಹೆಗ್ಗೋಡಿನ ನೀನಾಸಂನ ಕೆ. ವಿ. ಸುಬ್ಬಣ್ಣನರ ಪ್ರಭಾವಕ್ಕೆ ಬಿದ್ದ ಕಾಸರವಳ್ಳಿಯವರು ಆ ಮೂಲಕವೇ ವಿಶ್ವಸಿನಿಮಾಕ್ಕೆ ಕಿಟಕಿಬಾಗಿಲುಗಳನ್ನು ತೆರೆದಿಟ್ಟುಕೊಂಡವರು. ಅಕಿರಾ ಕುರಸೋವಾ, ಸತ್ಯಜಿತ್ ರೇ, ಓಜು, ಫೆಲಿನ, ಅಂಟೊನಿಯೊನಿಯಂಥ ಶ್ರೇಷ್ಠ ಚಿತ್ರ ನಿರ್ದೇಶಕರ ಪ್ರಭಾವಕ್ಕೆ ಒಳಗಾದ ಗಿರೀಶ್, ಆ ನೆಲೆಯಲ್ಲೇ ಬೆಳೆಯುತ್ತಾ ತಮ್ಮ ಚಿತ್ರಸಂಗತಿಗಳನ್ನು ತೆರೆದಿಡುತ್ತಾ ಹೋದರು.
ಘಟಶ್ರಾದ್ಧ ಅವರನ್ನು ಇಂದಿಗೂ ಪ್ರಸಿದ್ಧವಾಗಿರಿಸಿರುವ ಸೃಜನಶೀಲ ಕಲಾಕೃತಿ. ಸ್ವರ್ಣ ಕಮಲ ಪ್ರಶಸ್ತಿ ತಂದಿತ್ತಲ್ಲದೇ, ಹೊಸ ನಿರೀಕ್ಷೆಗಳನ್ನು ಸಿನಿಮಾಸಕ್ತರಲ್ಲಿ ಹುಟ್ಟು ಹಾಕಿತು. ಆ ನಿರೀಕ್ಷೆಗಳನ್ನು ಈಡೇರಿಸುತ್ತಲೇ ನಡೆದು ಬಂದ ಗಿರೀಶ್ ಕಾಸರವಳ್ಳಿಯವರ ಇತ್ತೀಚಿನ ಚಿತ್ರ ಕೂರ್ಮಾವತಾರ. ಇತ್ತೀಚೆಗಷ್ಟೇ ಗೋವಾದಲ್ಲಿ ಮುಗಿದ 43 ನೇ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿತವಾಗಿತ್ತು.
ಮನೆ, ಹಸೀನಾ, ಗುಲಾಬಿ ಟಾಕೀಸ್, ಕನಸೆಂಬೋ ಕುದುರೆಯನ್ನೇರಿ, ಕ್ರೌರ್ಯ, ನಾಯಿ ನೆರಳು, ಮೂರು ದಾರಿಗಳು ಇತರ ಪ್ರಮುಖ ಚಿತ್ರಗಳು.
ಘಟಶ್ರಾದ್ಧ, ತಬರನ ಕತೆ, ತಾಯಿ ಸಾಹೇಬ ಹಾಗೂ ದ್ವೀಪ ಚಿತ್ರಗಳಿಗೆ ಸ್ವರ್ಣ ಕಮಲ ಪ್ರಶಸ್ತಿ ಲಭಿಸಿದೆ. ನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು. ಹಲವಾರು ವಿದೇಶದ ಚಿತ್ರೋತ್ಸವಗಳಲ್ಲಿ ಇವರ ಚಿತ್ರಗಳು ಪ್ರದರ್ಶಿತವಾಗಿವೆ. ಪದ್ಮಶ್ರೀ ಪ್ರಶಸ್ತಿಯನ್ನು ಸರಕಾರ ನೀಡಿ ಗೌರವಿಸಿದೆ.
ಜಹ್ನು ಬರುವಾ
ಜಹ್ನು ಬರುವಾ ಅಸ್ಸಾಮಿನವರು. ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಜಹ್ನು ಬರುವಾ, ಬಾಲಿವುಡ್ ನಲ್ಲೂ ಚಿತ್ರಗಳನ್ನು ಮಾಡಿದ್ದಾರೆ. ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ಸೇರಿದಂತೆ ಇದುವರೆಗೆ 21ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಈ ಪೈಕಿ 12 ಚಲನಚಿತ್ರಗಳು.
ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಸಿನಿಮಾದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮುಗಿಸಿದ ನಂತರ ತಮ್ಮನ್ನು ತೊಡಗಿಸಿಕೊಂಡಿದ್ದು ಸಿನಿಮಾ ಕ್ಷೇತ್ರಕ್ಕಾಗಿಯೇ.
jahnu baruva
jahnu baruva
ಅವರ ಮೊದಲ ಚಿತ್ರ ಅಪರೂಪ ಕ್ಕೆ ಅತ್ಯುತ್ತಮ ಪ್ರಾದೇಶಿಕ ಪ್ರಶಸ್ತಿ ಬಂದಿದ್ದರೆ, ಹಲೊದಿಯ ಚೊರಯೆ ಬಾಧಾನ ಖಾಯ್(ದಿ ಕೆಟಾಸ್ಟ್ರೋಪ್) ಚಿತ್ರಕ್ಕೆ ರಾಷ್ಟ್ರೀಯ ಅತ್ಯುತ್ತಮ ಚಿತ್ರ (ಸ್ವರ್ಣ ಕಮಲಪ್ರಶಸ್ತಿ)ಪ್ರಶಸ್ತಿ ಲಭಿಸಿತ್ತು. ವಿವಿಧ ವಿದೇಶಿ ಚಿತ್ರೋತ್ಸವಗಳಲ್ಲೂ ಪ್ರಶಸ್ತಿ ಪಡೆದು, ಪ್ರಶಂಸೆಗೆ ಒಳಗಾಗಿರುವ ನಿರ್ದೇಶಕ ಜಹ್ನು.
ಮೈನೆ ಗಾಂಧಿ ಕೊ ನಹಿ ಮಾರಾ ಅವರು ಹಿಂದಿಯಲ್ಲಿ ನಿರ್ದೇಶಿಸಿದ ಚಿತ್ರ. ಅನುಪಮ್ ಖೇರ್ ಅಭಿನಯದ ಚಿತ್ರ ಹೆಚ್ಚು ಚರ್ಚೆಗೆ ಒಳಗಾಯಿತು. 1995 ರಲ್ಲಿ ಅವರ ಮತ್ತೊಂದು ಚಿತ್ರ ಖ್ಹಗೊರೊಲೊಯ್ ಬೊಹು ದೂರ್ ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಪಡೆಯಿತು. ಹಲವು ಉತ್ಸವಗಳಲ್ಲಿ ಇವರ ಸಿನಿಮಾಗಳು ಪ್ರದರ್ಶಿತವಾಗಿವೆ. ಬಂಧೋಣ್ ಇವರ ಚಿತ್ರ ಇತ್ತೀಚೆಗೆ ಮುಗಿದ ಗೋವಾ ಚಿತ್ರೋತ್ಸವದಲ್ಲೂ ಪ್ರದರ್ಶಿತವಾಗಿತ್ತು. ಹಿಂಸೆ ಎಲ್ಲದಕ್ಕೂ ಉತ್ತರವಲ್ಲ ಎಂಬುದೇ ಅವರ ದೃಷ್ಟಿ. ಸಾಮಾಜಿಕ ಸಮಸ್ಯೆಗಳನ್ನು ಎತ್ತಿಕೊಂಡು, ತಣ್ಣಗಿನ ಧ್ವನಿಯಲ್ಲೇ ಚರ್ಚಿಸುತ್ತಲೇ ಅನಾವರಣಗೊಳಿಸುತ್ತಾ ಹೋಗುವ ಜಹ್ನು, ಭಾರತೀಯ ಸಿನಿಮಾರಂಗದಲ್ಲಿ ವಿಭಿನ್ನ ದಾರಿ ಹಿಡಿದವರು. ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಭಾರತ ಸರಕಾರ.
ಜುಲೆಟ್ ಬಿನೋಸ್
ಜುಲೆಟ್ ಥಟ್ಟನೆ ನೆನಪಾಗುವುದು ತಮ್ಮ ಪಾತ್ರದ ಮೂಲಕ. ತಮ್ಮ ನೈಜ ಅಭಿನಯದ ಮೂಲಕವೇ ಸಿನಿಮಾಸಕ್ತರನ್ನು ಹಿಡಿದಿಡುವ ಶಕ್ತಿ ಜುಲೆಟ್‌ರದ್ದು. ಫ್ರೆಂಚ್‌ನ ಕಲಾವಿದೆ ಕಲಾವಿದೆಯೂ ಹೌದು, ನೃತ್ಯಗಾರ್ತಿಯೂ ಹೌದು. ಕ್ರಿಸ್ತೋಫ್ ಕಿಸ್ಲೊವಸ್ಕಿಯ ಥ್ರೀ ಕಲರ್ಸ್ : ಬ್ಲ್ಯೂ ಸಿನಿಮಾದಲ್ಲಿ ನಟಿಸಿದ ಜುಲೆಟ್, ಈ ಅವಕಾಶಕ್ಕಾಗಿ ಮತ್ತೊಬ್ಬ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪಿಲ್‌ಬರ್ಗ್‌ನ ಪ್ರಸಿದ್ಧ ಚಿತ್ರ ಜುರಾಸಿಕ್ ಪಾರ್ಕ್ ನಲ್ಲಿ ಅಭಿನಯಿಸುವ ಅವಕಾಶವನ್ನು ನಿರಾಕರಿಸಿದ್ದರು.
juliette binoche
juliette binoche
40 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಜುಲೆಟ್, ನಾಟಕಗಳಲ್ಲಿ ಸಾಕಷ್ಟು ಅಭಿನಯಿಸಿದ ನಂತರ ಚಿತ್ರ ನಿರ್ದೇಶಕ ಗೊಡಾರ್ಡ್‌ರ ಹೇಲ್ ಮೇರಿ ಚಿತ್ರದಲ್ಲಿ ಅಭಿನಯಿಸಿದರು. ಜಾಕ್ವೆಸ್ ಡೊಲನ್ ಮತ್ತು ಆಂಡ್ರ್ಯೆ ಟೆಶಿನಿಯಂಥ ನಿರ್ದೇಶಕರು ಜುಲೆಟ್ ರನ್ನು ತಾರಾಪಟ್ಟಕ್ಕೆ ಜಿಗಿಯುವಂತೆ ಮಾಡಿದರು. ಫಿಲಿಪ್ ಕೌಫ್‌ಮನ್ ನಿರ್ದೇಶಿಸಿದ ದಿ ಅನ್‌ಬೇರಬಲ್ ಲೈಟ್ನೆಸ್ ಆಫ್ ಬೀಯಿಂಗ್ ಚಿತ್ರದಲ್ಲಿ ನೀಡಿದ ಮನೋಜ್ಞ ಅಭಿನಯವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತಲ್ಲದೇ, ಹೊಸ ಅಧ್ಯಾಯವನ್ನೇ ತೆರೆಯಿತು.
ಥ್ರೀ ಕಲರ‍್ಸ್ : ಬ್ಲ್ಯೂ ಚಿತ್ರದ ಅಭಿನಯಕ್ಕೆ ವೆನಿಸ್ ಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು. ಬಳಿಕ ದಿ ಇಂಗ್ಲಿಷ್ ಪೇಷಂಟ್ ಚಿತ್ರದ ಅಭಿನಯಕ್ಕೆ ಆಸ್ಕರ್ ಪ್ರಶಸ್ತಿಯನ್ನೂ ಗಳಿಸಿದರು. 2010 ರಲ್ಲಿ ಅಬ್ಬಾಸ್ ಕಿರೋಸ್ತಮಿಯ ಸರ್ಟಿಫೈಡ್ ಕಾಪಿ ಚಿತ್ರದ ಅಭಿನಯಕ್ಕೆ ಮತ್ತೆ ಬರ್ಲಿನ್, ವೆನಿಸ್ ಉತ್ಸವಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು. ಇದಲ್ಲದೇ ಫ್ಲೈಟ್ ಆಫ್ ದಿ ರೆಡ್ ಬಲೂನ್, ಬ್ರೇಕಿಂಗ್ ಅಂಡ್ ಎಂಟರಿಂಗ್, ಡ್ಯಾಮೇಜ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಫಾತಿಶ್ ಅಕನ್
ಅಕನ್‌ನ ಟರ್ಕಿಶ್ ಸಮುದಾಯಕ್ಕೆ ಸೇರಿದರೂ, ಹುಟ್ಟಿದ್ದು ಹ್ಯಾಂಬರ್ಗ್‌ನಲ್ಲಿ. ಅಲ್ಲೇ ವಿಶುಯಲ್ ಕಮ್ಯುನಿಕೇಷನ್ಸ್‌ನಲ್ಲಿ ಪದವಿ ಪಡೆದವರು. 1998 ರಲ್ಲಿ ಚಿತ್ರ ಜಗತ್ತಿಗೆ ಬಂದ, ಅಕನ್ ಶಾರ್ಟ್ ಶಾರ್ಪ್ ಶಾಕ್ ಚಿತ್ರ ರೂಪಿಸಿದರು. ಇದಕ್ಕೆ ಮುನ್ನ ಎರಡು ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು.
Fatih akin
Fatih akin
ಮೊದಲನೆಯ ಚಿತ್ರವೇ ಒಂದಿಷ್ಟು ಹೆಸರು ಮತ್ತು ಪ್ರಸಿದ್ಧಿಯನ್ನು ತಂದುಕೊಟ್ಟಿತು. ಬಳಿಕ ಇನ್ ಜುಲೈ, ಫರ‍್ಗಾಟ್ ಟು ಗೋ ಬ್ಯಾಕ್, ಸೊಲಿನೊ, ಹೆಡ್-ಆನ್ ಸಿನಿಮಾಗಳನ್ನು ನಿರ್ದೇಶಿಸಿದ. ಹೆಡ್ ಆನ್ ಮತ್ತೆ ಯಶಸ್ಸಿನ ಉತ್ತುಂಗಕ್ಕೇರಿಸಿತು. ಬರ್ಲಿನ್ ಉತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿಯನ್ನೂ ತಂದುಕೊಟ್ಟಿತು. ಅವರು ನಿರ್ದೇಶಿಸಿದ ಕ್ರಾಸಿಂಗ್ ದಿ ಬ್ರಿಡ್ಜ್ : ದಿ ಸೌಂಡ್ ಆಫ್ ಇಸ್ತಾಂಬುಲ್ ಸಾಕ್ಷ್ಯಚಿತ್ರವೂ ವಿಶೇಷವೆನಿಸಿತ್ತು.
ಎರಡು ಸಂಸ್ಕೃತಿಗಳ ನಡುವಿನ ಮೌನ ಸಂವಾದವನ್ನು ಚಿತ್ರದ ಮೂಲಕ ಹೇಳಲು ಪ್ರಯತ್ನಿಸಿದ ಅವರ ಚಿತ್ರ ದಿ ಎಡ್ಜ್ ಆಫ್ ಹೆವನ್(2007) ಕಾನ್ಸ್ ಉತ್ಸವದಲ್ಲಿ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆಯಿತು. ಸೋಲ್ ಕಿಚನ್, ಪಲ್ಯೂಟಿಂಗ್ ಪ್ಯಾರಡೈಸ್ (ಸಾಕ್ಷ್ಯಚಿತ್ರ) ಅವರ ಇತ್ತೀಚಿನವು.
ಜರ್ಮನಿಯಲ್ಲಿ ಬದುಕುತ್ತಿರುವ ಟರ್ಕಿಯನ್ನರ ಬದುಕೇ ಸಾಮಾನ್ಯವಾಗಿ ಅಕನ್ ರ ಕಥಾವಸ್ತು. ಎರಡು ವಿಭಿನ್ನ ಸಂಸ್ಕೃತಿಯ ನಡುವಿನ ಅವರ ಗೊಂದಲ, ಹೋರಾಟವೆಲ್ಲವೂ ಅಕನ್ ರ ಸಿನಿಮಾದಲ್ಲಿ ಪಾತ್ರ ಪಡೆಯಲು ಹಂಬಲಿಸಿವೆ. ಅಕನ್ ಸಹ ತಮ್ಮ ಟರ್ಕಿಯ ಮೂಲಗಳನ್ನು ನಿರಾಕರಿಸಲು ಇಚ್ಛಿಸುವುದಿಲ್ಲ.

0 comments:

Post a Comment

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms