Tuesday, November 20, 2012

ಸಿನಿಮಾ ನನ್ನಿಷ್ಟದ ಮಾಧ್ಯಮ : ಜಾನುಸಿ


ಪಣಜಿ : ಬಹುನಿರೀಕ್ಷಿತ ನವಿಲು ಕುಣಿತ ಆರಂಭಗೊಂಡಿದೆ !
ಹನ್ನೊಂದುದಿನ ಇನ್ನೇನಿದ್ದರೂ ನವಿಲಿನ ಕುಣಿತವಷ್ಟೇ. ಕಣ್ತುಂಬಿಕೊಳ್ಳುವ ಉತ್ಸಾಹವಿರಬೇಕು ಅಷ್ಟೇ.
ಗೋವೆಯ ರಾಜಧಾನಿ ಪಣಜಿಯ ಕಲಾ ಅಕಾಡೆಮಿ ಬಳಿ ನಿರ್ಮಿಸಿದ್ದ ಬೃಹತ್ ವೇದಿಕೆಯಲ್ಲಿ ಮಂಗಳವಾರ ಸಂಜೆ ಖ್ಯಾತ ನಟ ಅಕ್ಷಯ್ ಕುಮಾರ್ 43 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.
"ನನ್ನ ಬದುಕಿಗೆ ಹೆಚ್ಚು ಖುಷಿಯನ್ನು ತುಂಬಿರುವುದು ಈ ಸಿನಿಮಾ. ಚಿಕ್ಕಂದಿನಿಂದಲೂ ಮೋಹವಾಗಿಯೇ ಉಳಿದಿದ್ದ ಸಿನಿಮಾ ಮಾಧ್ಯಮ ಇಂದಿಗೂ ಆ ಮೋಹಕತೆಯನ್ನು ಉಳಿಸಿಕೊಂಡಿದೆ, ಇಲ್ಲಿವರೆಗೂ ತಂದು ನಿಲ್ಲಿಸಿರುವ ಈ ಮಾಧ್ಯಮವನ್ನು ಮರೆಯಲಾಗದು’ ಎಂದವರು ಅಕ್ಷಯ್ ಕುಮಾರ್.
ಹೆಸರಾಂತ ಪೊಲಿಶ್ ಚಿತ್ರ ನಿರ್ದೇಶಕ ಕ್ರಿಸ್ಟೋಫ್ ಜಾನುಸಿಯವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ, “ಕೇಂದ್ರ ಸರಕಾರ ಸಿನಿಮಾ ಮಾಧ್ಯಮವನ್ನು ಹೆಚ್ಚು ಜನಪ್ರಿಯಗೊಳಿಸಲು ಸಾಕಷ್ಟು ಯೋಜನೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಸಿನಿಮಾ ಪಾರಂಪರಿಕ ಮಿಷನ್ ಸ್ಥಾಪಿಸುವ ಇರಾದೆಯನ್ನು ಹೊಂದಿದ್ದು, ಸದ್ಯವೇ ಜಾರಿಗೊಳ್ಳಲಿದೆ’ ಎಂದರು.
ಇದೇ ಸಂದರ್ಭದಲ್ಲಿ, “ಅತ್ಯಂತ ಪ್ರಭಾವಶಾಲಿಯಾಧ ಸಿನಿಮಾ ಮಾಧ್ಯಮವನ್ನು ಬಳಸಿಕೊಂಡು ಇನ್ನಷ್ಟು ಬೃಹತ್ ಪ್ರಮಾಣದಲ್ಲಿ ಜನರನ್ನು ರಚನಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು’ ಎಂದು ಸಿನಿಮಾ ನಿರ್ದೇಶಕರನ್ನು ಮನವಿ ಮಾಡಿದರು.
ಜೀವಮಾನ ಸಾಧನೆಗೆ ಪ್ರಶಸ್ತಿ ಪುರಸ್ಕರಿಸಿದ ಕ್ರಿಸ್ಟೋಫ್ ಜಾನುಸಿ, “ ಗೌರವ ಇನ್ನಷ್ಟು ಸಿನಿಮಾಗಳನ್ನು ಮಾಡುವ ಹುರುಪು ತುಂಬಿದೆ,. ಚಲಿಸುವ ಚಿತ್ರಗಳು ಮತ್ತು ಧ್ವನಿಯನ್ನು ಬಳಸಿಕೊಂಡು ನಮ್ಮ ಜೀವನದ ಅನುಭವವನ್ನು ಕಥೆಯಾಗಿ ಹೇಳಲು ಇರುವ  ಮಾಧ್ಯಮದಿಂದ ದೂರವುಳಿಯಲು ನನ್ನಿಂದಾಗದು. 21 ನೇ ಶತಮಾನವನ್ನು ಏಷ್ಯಾದ ಶತಮಾನವೆಂದು ಹೇಳಲಾಗುತ್ತಿದೆ. ಆದರೆ, ನನ್ನ ಅನಿಸಿಕೆಯಲ್ಲಿ ಅದು ಭಾರತದ ಶತಮಾನ’ಎಂದರು.
ಗೋವಾವನ್ನು ಅತ್ಯುತ್ತಮ ಚಿತ್ರನಗರಿಯನ್ನಾಗಿಸುವ ಹೊಣೆ ಎಂಟು ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದೆ. ಈ ವರ್ಷ ಆ ಅಭಿದಾನ ದೊರೆತಿದೆ. ಆದರೆ ನಮ್ಮ ಕೆಲಸ ಇಲ್ಲಿಗೆ ನಿಲ್ಲದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಮತ್ತಷ್ಟು ವೈಭವೋಪೇತಗೊಳಿಸುವ ಕೆಲಸ ಇಂದಿನಿಂದ ಆರಂಭಗೊಳ್ಳಲಿದೆ ಎಂದವರು ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್.
ಇದೇ ಸಂದರ್ಭದಲ್ಲಿ ಸಿನಿಮಾ ತೀರ್ಪುಗಾರರಿಗೆ ಸನ್ಮಾನಿಸಲಾಯಿತು. ಅಸ್ಸಾಮಿ ಚಿತ್ರ ನಿರ್ದೇಶಕ ಜಾನು ಬರುವಾ ಅವರನ್ನು ಗೌರವಿಸಲಾಯಿತು. ಉತ್ಸವದ ಆರಂಭದ ಚಿತ್ರ “ಲೈಫ್ ಆಫ್ ಫೈ” ನಲ್ಲಿ ನಟಿಸಿರುವ ತಬು ಮತ್ತು ಇರ್ಫಾನ್ ಖಾನ್ ರನ್ನೂ ಸನ್ಮಾನಿಸಲಾಯಿತು. ಗೋವಾದ ರಾಜ್ಯಪಾಲರಾದ ವಾಂಚೂ, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಉದಯ ಕುಮಾರ್ ವರ್ಮ, ಗೋವಾದ ಕಾರ್ಯದರ್ಶಿ ವಿಜಯನ್, ನಟಿ ಕಾಜಲ್ ಅಗರ್ವಾಲ್ ಉಪಸ್ಥಿತರಿದ್ದರು.

0 comments:

Post a Comment

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms