ವರದಿ : ಅರವಿಂದ ನಾವಡ
ಪಣಜಿ : ಕಲಾತ್ಮಕ ಚಿತ್ರಗಳನ್ನು ಆಸಕ್ತ ಪ್ರೇಕ್ಷಕ ಸಮುದಾಯಕ್ಕೆ ತಲುಪಿಸುವ ಕೆಲಸವನ್ನು ಸರಕಾರ ಕೈಗೊಳ್ಳಬೇಕು ಎಂದು ಹಿರಿಯ ನಟ ಓಂಪುರಿ ಆಗ್ರಹಿಸಿದ್ದಾರೆ.
ಗೋವೆಯ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಕಲಾತ್ಮಕ ಚಿತ್ರಗಳಿಗೆ ದೊರೆಯುತ್ತಿರುವ ಸಹಕಾರವನ್ನು ಮರೆಯುವಂತಿಲ್ಲ. ಆದರೆ, ಪ್ರತಿವರ್ಷ ಸ್ವತಂತ್ರ ಸಿನಿಮಾ ತಯಾರಕರು ರೂಪಿಸುವ ನೂರಾರು ಭಾರತೀಯ ಸಿನಿಮಾಗಳು ನೈಜ ಪ್ರೇಕ್ಷಕರಿಗೆ ತಲುಪುತ್ತಿಲ್ಲ. ಅವು ಕೆಲವೇ ಪ್ರದರ್ಶನಗಳಿಗೆ ಸೀಮಿತವಾಗುತ್ತಿವೆ' ಎಂದು ವಿಷಾದಿಸಿದರು.
"ಹೆಚ್ಚಿನ ಜನ ಸಮುದಾಯಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವತ್ತ ಪ್ರತ್ಯೇಕ ಚಾನೆಲ್ ನ್ನು ಆರಂಭಿಸುವ ಅಥವಾ ದೂರದರ್ಶನದಲ್ಲಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರಕಾರ ಆಲೋಚಿಸಬೇಕು. ಸೃಜನಶೀಲಕೃತಿಗಳು ಸಂಬಂಧಪಟ್ಟ ಆಸಕ್ತ ಸಮುದಾಯಕ್ಕೆ ತಲುಪಿಸುವುದು ಈ ಹೊತ್ತಿನ ತುರ್ತು ಅಗತ್ಯದ ಕೆಲಸ' ಎಂದು ಹೇಳಿದರು.
"ಪ್ರಸ್ತುತ ಇರುವ ಚಲನಚಿತ್ರ ವಿತರಣಾ ವ್ಯವಸ್ಥೆಯನ್ನು ನಾನು ದೂರುತ್ತಿಲ್ಲ. ಅವರು ಅದನ್ನು ವ್ಯವಹಾರವನ್ನಾಗಿ ಮಾಡಿಕೊಂಡವರು. ಆದ್ದರಿಂದ, ಇಂಥ ಸ್ವತಂತ್ರ ಸಿನಿ ತಯಾರಕರು ರೂಪಿಸುವ ಸಿನಿಮಾಗಳನ್ನು ತಲುಪಿಸುವ ಕೆಲಸಕ್ಕೆ ಸರಕಾರ ಮನಸ್ಸು ಮಾಡಬೇಕು' ಎಂದು ಹೇಳಿದರು.
ನೀತಿನಿರೂಪಕರು ನೋಡಲಿ
ಕಲಾತ್ಮಕ ಸಿನಿಮಾಗಳು ಸಮಾಜದಲ್ಲಿನ ಸಮಸ್ಯೆಗಳನ್ನೇ ಪ್ರತಿಫಲಿಸುವ ರೀತಿಯಲ್ಲಿ ರೂಪಿತವಾಗುತ್ತಿದ್ದು, ನೀತಿ ನಿರೂಪಕರು ಇವುಗಳನ್ನು ವೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ಇತ್ತೀಚೆಗೆ "ಚಕ್ರವ್ಯೂಹ" ಸಿನಿಮಾದಲ್ಲಿ ನಟಿಸಿದೆ. ಅದು ನಕ್ಸಲ್ ಸಮಸ್ಯೆ ಕುರಿತಾದುದು. ಇಂದು ದೇಶದ ಹಲವೆಡೆ ಈ ಸಮಸ್ಯೆ ಉದ್ಭವಿಸಿದೆ. ಸಿನಿಮಾ ನಿರ್ಮಿಸುವವರು ಸಾಕಷ್ಟು ಅಧ್ಯಯನ ಕೈಗೊಂಡು ತೆರೆಯ ಮೇಲೆ ತಂದಿರುತ್ತಾರೆ. ಇಂಥ ಚಿತ್ರಗಳನ್ನು ವೀಕ್ಷಿಸಿದರೆ ಸಮಸ್ಯೆಯ ರೂಪ ಅರಿವಾದೀತು. ಸಮಸ್ಯೆಯ ನಿವಾರಣೆಗೆ ಪರಿಹಾರ ರೂಪಿಸಲು ನೆರವಾದೀತು' ಎಂದರು.

ಇದಕ್ಕೆ ಮುನ್ನ ಮಾತನಾಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕಾರ್ಯದರ್ಶಿ ಉದಯಕುಮಾರ್ ವರ್ಮ, "12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತೀಯ ಚಲನಚಿತ್ರ ಪರಂಪರೆಯನ್ನು ಬೆಳೆಸುವತ್ತ ಪೂರಕವಾಗುವಂತೆ 400 ಕೋಟಿ ರೂ. ಅಂದಾಜಿನ ರಾಷ್ಟ್ರೀಯ ಚಲನಚಿತ್ರ ಮಿಷನ್ ಪ್ರಾರಂಭಿಸಲಾಗುತ್ತಿದೆ. ಹಾಗೆಯೇ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರಸಾರಕ್ಕೂ ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ. ಸಾಕ್ಷ್ಯಚಿತ್ರ ನಿರ್ಮಿಸುವವರಿಗೆ ಹಣದ ಸಹಾಯ ಒದಗಿಸುವುದು ಹಾಗೂ ಅವುಗಳ ಪ್ರಸಾರಕ್ಕೆ ದೂರದರ್ಶನದಲ್ಲಿ ಸೂಕ್ತ ಅವಕಾಶ ಕಲ್ಪಿಸಲು ಯೋಚಿಸಲಾಗುತ್ತಿದೆ.ಕಲಾತ್ಮಕ ಸಿನಿಮಾಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗವಿದ್ದರೆ ತಿಳಿಸಿ' ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಕಥಾ ಮತ್ತು ಕಥೇತರ ವಿಭಾಗದ ಜ್ಯೂರಿಗಳನ್ನು ಸನ್ಮಾನಿಸಲಾಯಿತು. ಶ್ಯಾಮ್ ಬೆನಗಲ್, ಪಿ. ಕೆ. ನಾಯರ್, ಬುದ್ಧದೇವ್ ದಾಸ್ ಗುಪ್ತ ಮತ್ತಿತರರು ಭಾಗವಹಿಸಿದ್ದರು.
0 comments:
Post a Comment