ವರದಿ : ಅರವಿಂದ ನಾವಡ
43 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ಘಾಟನೆಯನ್ನು ಕಂಡವರಿಗೆ ಅನ್ನಿಸಿದ್ದು ಇದೇ. ತೀರಾ ಸಪ್ಪೆ ಎನಿಸುವ ನಿರೂಪಣೆಯಿಂದ ಹಿಡಿದು, ಹನ್ನೊಂದು ದಿನದ ಸಂಭ್ರಮಕ್ಕೆ ಗೆಜ್ಜೆ ಕಟ್ಟುವ ಕೆಲಸವಾಗಲೇ ಇಲ್ಲ.
ಈ ಬಾರಿಯದು ಬರಿದೇ 43 ನೇ ಚಿತ್ರೋತ್ಸವವಾಗಿರಲಿಲ್ಲ. ಜತೆಗೆ ಭಾರತೀಯ ಸಿನಿಮಾದ ಶತಮಾನೋತ್ಸವ ವರ್ಷವೂ ಆಗಿತ್ತು. ಆದರೆ, ಇಡೀ ಉದ್ಘಾಟನಾ ಸಮಾರಂಭದಲ್ಲಿ ಆ ಉತ್ಸಾಹವೇ ಇರಲಿಲ್ಲ.
ಹಲವು ಕಾರಣಗಳಿಂದ ಬಹುಮುಖ್ಯ ಉತ್ಸವವಾಗಿರುವ ಇದರ ಉದ್ಘಾಟನೆ ಬಹಳಷ್ಟು ಸಂಭ್ರಮ ಮತ್ತು ಬದುಕಿನ ಸವಿನೆನಪಾಗಿ ಉಳಿದೀತೆಂದು ಬಂದವರಿಗೆ ಸಿಕ್ಕಿದ್ದು ಮತ್ತೊಂದು ಸಮಾರಂಭವಷ್ಟೇ.
ಔಪಚಾರಿಕ ಸಮಾರಂಭವನ್ನು ಹೊರತುಪಡಿಸಿದರೆ ಬೇರೇನೂ ಇರಲಿಲ್ಲ. ಸರೋಜ್ ಖಾನ್ ಸಂಯೋಜಿಸಿದ ನೂರು ವರ್ಷ ಭಾರತೀಯ ಸಿನಿಮಾ ಕುರಿತ “ನೃತ್ಯರೂಪಕ” ಒಂದಷ್ಟು ಹೊತ್ತು ರಂಜಿಸಿದರೆ, ಕೈಲಾಸ್ ಖೇರ್ ಅವರ ಒಂದಿಷ್ಟು ಗೀತೆಗಳು ಖುಷಿ ನೀಡಿದವು.
‘ಕಾರ್ಯಕ್ರಮ ಇನ್ನಷ್ಟು ಗ್ರ್ಯಾಂಡ್ ಆಗಿರಬೇಕಿತ್ತು’ ಎಂದು ಹೇಳಿದವರು ಗೋವಾದ ಶ್ಯಾಂ ಸುಂದರ್. ಇಂಥ ಅಭಿಪ್ರಾಯ ಹಲವೆಡೆ ಕೇಳಿಬಂದಿತು.
ಟ್ರ್ಯಾಕ್
ಕೈಲಾಸ್ ಖೇರ್, ಸುಮಾರು ಏಳೆಂಟು ಹಾಡುಗಳನ್ನು ಹಾಡಿದರು. ಅದೂ ನೈಜಗಾನವೆನಿಸಿರಲಿಲ್ಲ. ಹಿಂದೆ ಟ್ರ್ಯಾಕ್ ಹಾಕಿಕೊಂಡು ಫಾಲೋ ಮಾಡಿದಂತಿತ್ತು.
ಎಕ್ಕ ರಾಜರಾಣಿ
ಇಡೀ ಚಲನಚಿತ್ರೋತ್ಸವದಲ್ಲಿ ಕನ್ನಡದ ಮಾತು ಕೇಳಿದ್ದೆಂದರೆ ಕೈಲಾಶ್ ಖೇರ್, "ಜಾಕಿ" ಚಿತ್ರದ "ಎಕ್ಕ ರಾಜರಾಣಿ" ಗೀತೆಯನ್ನು ಟ್ರ್ಯಾಕ್ ನಲ್ಲಿ ಹೇಳಿದ್ದು. ಇಷ್ಟು ಬಿಟ್ಟರೆ ಬೇರೇನೂ ಇರಲಿಲ್ಲ.
ಮೊದಲ ಚಿತ್ರಕ್ಕೆ ಫುಲ್ ರಶ್
ಲೈಫ್ ಆಫ್ ಫೈ ಚಿತ್ರಕ್ಕೆ ಸಿನಿಮಾ ಮಂದಿರ ಹೌಸ್ ಫುಲ್. ಕಲಾ ಅಕಾಡೆಮಿಯಲ್ಲಿ ಏರ್ಪಡಿಸಲಾಗಿದ್ದ ಉತ್ಸವದ ಮೊದಲ ಚಿತ್ರಕ್ಕೆ ಸಿನಿಮಾ ಮಂದಿರ ಭರ್ತಿಯಾಗಿ ಎರಡೂ ಕಡೆ ಸಾಲಾಗಿ ನಿಂತುಕೊಂಡೇ ಇಡೀ ಸಿನಿಮಾ ವೀಕ್ಷಿಸಿದವರು ಹಲವರು.
ಉದ್ಘಾಟನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಚಿತ್ರಮಂದಿರದತ್ತ ಎಲ್ಲರೂ ದೌಡಾಯಿಸಿದ್ದರಿಂದ ಸ್ವಲ್ಪ ನೂಕು ನುಗ್ಗಲಿನ ಅನುಭವವಾಯಿತು. ಆದರೂ ಗಂಭೀರ ಸಮಸ್ಯೆಯಾಗಲಿಲ್ಲ. ಥ್ರೀಡಿ ಚಲನಚಿತ್ರವಾಗಿದ್ದರಿಂದ ಹಲವರು ಇಷ್ಟ ಪಟ್ಟರು.
0 comments:
Post a Comment