Tuesday, June 23, 2009

ವುಮೆನ್ ಟ್ರಾಫಿಕಿಂಗ್ ಕುರಿತಾದ ಎರಡು ಚಿತ್ರಗಳು

ಡ್ರಗ್ ಟ್ರಾಫಿಕಿಂಗ್ ಮತ್ತು ವುಮೆನ್ ಟ್ರಾಫಿಕಿಂಗ್ ಕುರಿತ ಹಲವು ಸಿನೆಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. 2001ರಲ್ಲಿ ಬಂದ ಟ್ರಾಫಿಕ್ ಸಿನೆಮಾ ಕಲಾತ್ಮಕತೆಯಲ್ಲೂ ಮಿಂಚಿದ ಅಪರೂಪದ ಚಿತ್ರ. ಇದರಲ್ಲಿ ಡ್ರಗ್ ಕಥೆ ಇದೆ. ಹಲವರು ಇದನ್ನು ಸ್ಟೀವನ್ ಸೋಡೆರ್‌ಬಗ್‌ನ ಮಾಸ್ಟರ್‌ಪೀಸ್ ಎಂದೂ ಕರೆಯುತ್ತಾರೆ.
taken-movie
ಕಳೆದ ವರ್ಷದ ಆರಂಭದಲ್ಲಿ ಬಂದ ಟೇಕನ್ ಸಿನೆಮಾವು ವುಮೆನ್ ಟ್ರಾಫಿಕಿಂಗ್ ಕುರಿತ ಅಕ್ಷನ್ ಮೂವೀ. ಲಿಯಾಮ್ ನೀಸನ್‌ನ ಲೀಲಾಜಾಲದ ನಟನೆ, ಅವನ ಸ್ಪಷ್ಟ ಡಯಲಾಗ್‌ಗಳು, ಸ್ಟಂಟ್‌ಗಳನ್ನು ನೋಡಲು, ಸಿನೆಮಾದ ಉದ್ದಕ್ಕೂ ಕೊಂಚ ವಿಪರೀತ ಎನ್ನಬಹುದಾದ ಗನ್ ಹಾರಾಟವನ್ನು ಅನುಭವಿಸಲು ಈ ಸಿನೆಮಾ ನೋಡಬಹುದು. ಸೆಮಿ ಅಕ್ಷನ್ ಮೂವೀ ಅಂತಲೂ ಇದನ್ನು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಅಪಹೃತ ಮಗಳನ್ನು ಸಂರಕ್ಷಿಸುವ ಭಾವುಕ ಕಥೆಯೂ ಇದೆ.

ಮಕ್ಕಳು ಹೊರಗೆ ಹೋಗುವಾದ ಅದರಲ್ಲೂ ಪಿಕ್‌ನಿಕ್ ಮುಂತಾದ ಹೊರಸ್ಥಳಗಳ ಪ್ರವಾಸಕ್ಕೆ ಹೊರಟಾಗ ತಂದೆ ತಾಯಂದಿರು ದಿನಾ ರಾತ್ರಿ ಮೊಬೈಲ್ ಮಾಡು ಅಂತ ಹೇಳುವುದು ಇಂದು ಭಾರತದಲ್ಲೂ ಕಾಣಬಹುದಾದ ಸಹಜ ವರ್ತನೆ. ಇಲ್ಲೂ ಹೀಗೇ ಆಗುತ್ತೆ. ನೀಸನ್ ತನ್ನ ಮಗಳು ಪ್ಯಾರಿಸ್‌ಗೆ ಹೋಗುವೆ ಎಂದಾಗ ಮೊದಲು ಒಪ್ಪುವುದಿಲ್ಲ. ಜೊತೆಗೆ ಮಗಳು ಇರೋದೇ ತನ್ನಿಂದ ಡೈವೋರ್ಸ್ ಆದವಳ ಜೊತೆಗೆ. ಈ ಯಮ್ಮನೂ ಘಾಟಿ. ಮಗಳನ್ನು ಕಳಿಸಲೇಬೇಕು ಎಂಬ ಹಟ. ಕಾನೂನಿನ ಪ್ರಕಾರ ಅಪ್ಪನ ಅನುಮತಿ ಬೇಕೇ ಬೇಕು. ಕೊನೆಗೂ ಅಪ್ಪನಾದ ನೀಸನ್ ಅನುಮತಿ ಕೊಡ್ತಾನೆ ; ದಿನವೂ ಫೋನ್ ಮಾಡಬೇಕು, ಅಪರಿಚಿತರೊಂದಿಗೆ ವ್ಯವಹರಿಸಬಾರದು ಇತ್ಯಾದಿ ಷರತ್ತುಗಳೊಂದಿಗೆ.

beluru copy 1ಮಗಳು ತನ್ನ ಸ್ನೇಹಿತೆಯೊಡನೆ ಪ್ಯಾರಿಸ್‌ಗೆ ಹೋಗಿ ಇಳಿದ ಕ್ಷಣದಿಂದಲೇ ಘಟನೆಗಳು ತೆರೆದುಕೊಳ್ಳುತ್ತವೆ. ತನ್ನ ಅಪಹರಣವನ್ನೂ ಮಗಳು ಅಪ್ಪನಿಗೆ ಮೊಬೈಲ್ ಮೂಲಕ ಆನ್‌ಲೈನ್ ರಿಯಲ್‌ಟೈಮ್ ವಿವರಿಸುತ್ತಾಳೆ. ಮೊದಲೇ ಅಪ್ಪನ ವೃತ್ತಿಯೇ ಪ್ರಿವೆಂಟರ್. ಪೊಲೀಸ್ ಥರ ಪತ್ತೇದಾರಿ ಕೆಲಸದ ಮೂಲಕ ಅವಘಡಗಳನ್ನು ತಪ್ಪಿಸೋದೇ ಅವನ ವೃತ್ತಿ. ಕೇಳಬೇಕೆ? ಮಗಳು ತಿಳಿಸಿದ ಅಲ್ಪ ಸ್ವಲ್ಪ ವಿವರಗಳನ್ನೇ ಹಿಡಿದುಕೊಂಡು, ಪ್ಯಾರಿಸಿಗೆ ಬಂದಿಳಿದು ಆಕ್ಷನ್ ಶುರು ಮಾಡುತ್ತಾನೆ. ಮುಂದಿನ ಕಥೆಯೆಲ್ಲ ಚಕಚಕನೆ ಸಾಗುತ್ತದೆ. ನಿಜಕ್ಕೂ ಇತ್ತೀಚೆಗಿನ ಬಾಂಡ್ ಸಿನೆಮಾಗಳನ್ನು ಚಚ್ಚಿಹಾಕುವಷ್ಟು ಆಕ್ಷನ್ ಇಲ್ಲಿದೆ. ನೀಸನ್‌ನ ಪ್ರೌಢ ಅಭಿನಯವಂತೂ ಕಣ್ಣಿಗೆ ಕಟ್ಟುತ್ತದೆ.

ಈ ಸಿನೆಮಾ ನೋಡಿದ ಮೇಲೆ ಇದೇ ಥರ ಇನ್ನಾವ ಸಿನೆಮಾ ಇದೆ ಎಂದು ಹುಡುಕಿದೆ. ಟ್ರೇಡ್ ಎಂಬ ಸಿನೆಮಾ ಸಿಕ್ಕಿತು. ಅದನ್ನೂ ಕದ್ದು ನೋಡಿ ಬರೆಯೋ ಹೊತ್ತಿಗೆ ಬ್ಲಾಗ್ ತಡವಾಯ್ತು!!

ಟ್ರೇಡ್ ಸಿನೆಮಾ ಕೂಡಾ ಇದೇ ಕಥಾ ಹಂದರವನ್ನು ಹೊಂದಿದೆ. ಇಲ್ಲಿ ಮೆಕ್ಸಿಕೋದ ಮಧ್ಯಮವರ್ಗದ ಕುಟುಂಬದಲ್ಲಿ ಅಣ್ಣ ಉಡುಗೊರೆಯಾಗಿ ಕೊಟ್ಟ ಸೈಕಲನ್ನು ಹತ್ತಿ ಸವಾರಿ ಮಾಡುತ್ತಿದ್ದ ತಂಗಿ ರಶಿಯಾದ ವುಮೆನ್ ಟ್ರಾಫಿಕಿಂಗ್ ಗ್ಯಾಂಗ್‌ಗೆ ಸಿಕ್ಕಿಬೀಳುತ್ತಾಳೆ. ಅಣ್ಣ, ತನ್ನ ಸ್ನೇಹಿತರೊಂದಿಗೆ ಹುಡುಕಾಟ ಆರಂಭಿಸುತ್ತಾನೆ. ಇಲ್ಲಿ ಗನ್ ಇಲ್ಲ; ಕ್ಷಣಕ್ಷಣಕ್ಕೂ ಆಕ್ಷನ್ ಇಲ್ಲ. ಅತ್ಯಂತ ವಾಸ್ತವಿಕವಾದ, ಕಲಾತ್ಮಕ ಚಿತ್ರ ಅನ್ನಿಸುವ ಹಾಗೆ ಕಥೆ ಬೆಳೆಯುತ್ತದೆ. ವೃದ್ಧ ಪೊಲೀಸನೊಬ್ಬ ತನ್ನ ಕಳೆದು ಹೋದ ಮಗಳನ್ನು ಹುಡುಕಿಕೊಂಡು ಬರುವುದಕ್ಕೂ, ಈ ಅಣ್ಣ ಅವನ ಕಾರಿನ ಡಿಕ್ಕಿಯಲ್ಲಿ ಅಡಗಿಕೊಳ್ಳುವುದಕ್ಕೂ ಸರಿಹೋಗುತ್ತದೆ. ಅಲ್ಲಿಂದ ಇಬ್ಬರೂ ತಂಗಿಯ ಹುಡುಕಾಟ ನಡೆಸಿ ನ್ಯೂ ಜೆರ್ಸಿಗೆ ಹೋಗ್ತಾರೆ.
Trade pic.jpeg
ಎರಡೂ ಸಿನೆಮಾದಲ್ಲಿ ಅಪಹೃತ ಹೆಣ್ಣಿನ ಹರಾಜು ನಡೆಯುತ್ತದೆ. ಟೇಕನ್‌ನಲ್ಲಿ ಡ್ರಗ್ ಸೇವನೆಯಿಂದ ಮತ್ತೇರಿದ ತೂರಾಡುವ ಮಗಳನ್ನು ಸ್ವತಃ ತಂದೆಯೇ ಹರಾಜಿನಲ್ಲಿ ಖರೀದಿಸುವ ದೃಶ್ಯ ರೌದ್ರತೆಯಿಂದ ಕೂಡಿದೆ. ಹಾಗೆಯೇ ಪೊಲೀಸನ ನೆರವಿನಿಂದ ಇಂಟರ್‌ನೆಟ್ ಮೂಲಕ ತಂಗಿಯನ್ನು ಎಷ್ಟೋ ಸಾವಿರ ಡಾಲರ್‌ಗಳಿಗೆ ಕೊಳ್ಳುವ ಅಣ್ಣನ ಮುಖಭಾವ ತುಂಬಾ ಹೊತ್ತು ನೆನಪಿನಲ್ಲಿ ಉಳಿಯುತ್ತದೆ. ತಂಗಿಯ ಅಭಿನಯವೂ ಚಿತ್ರದುದ್ದಕ್ಕೂ ತುಂಬಾ ಮನೋಜ್ಞವಾಗಿದೆ.

ಎರಡೂ ಸಿನೆಮಾಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳುವುದಾದರೆ ಟೊರೆಂಟ್ ಲಿಂಕ್‌ಗಳು ಇಲ್ಲಿವೆ: ಟ್ರೇಡ್:http://www.mininova.org/get/2440585
ಟೇಕನ್ : http://www.mininova.org/get/1980837

ಒಂದೇ ಕಥೆಯನ್ನು ಇಬ್ಬರು ನಿರ್ದೇಶಕರು, ನೋಡುವ ರೀತಿ ಹೇಗೆ ವಿಭಿನ್ನವಾಗಿರುತ್ತೆ ಎಂದು ತಿಳಿದುಕೊಳ್ಳಲು ಎರಡೂ ಸಿನೆಮಾ ನೋಡಿ. ಮನರಂಜನೆ ಬೇಕೋ, ಮನೋಜ್ಷ ಕಥೆ ಸಾಕೋ ಎಂಬ ಪ್ರಶ್ನೆ ಮೂಡುತ್ತದೆ. ಮೊದಲು ಟೇಕನ್ ನೋಡಿದ ನಾನು ಅಬ್ಬ ಎಂಥ ಆಕ್ಷನ್ ಎಂದು ಹುಬ್ಬೇರಿಸಿದ್ದೆ. ಆಮೇಲೆ ಟ್ರೇಡ್ ನೋಡಿದ ಮೇಲೆ ವಸ್ತುಸ್ಥಿತಿಯನ್ನು ಬಿಂಬಿಸೋ ಚಿತ್ರವೂ ಮುಖ್ಯ ಅನ್ನಿಸಿತು.

0 comments:

Post a Comment

Twitter Delicious Facebook Digg Stumbleupon Favorites More

 
Design by Free WordPress Themes | Bloggerized by Lasantha - Premium Blogger Themes | Grants For Single Moms